ಮುಂಡಾ
	ಆಸ್ಟ್ರಿಕ್ ಭಾಷಾಪರಿವಾರಕ್ಕೆ ಸೇರಿದ ಒಂದು ಪ್ರಮುಖ ಭಾಷಾವರ್ಗ, ಮುಂಡಾರಿ, ಕೋಲ್, ಕೊಲೇರಿಯನ್ ಎಂಬವು ಪರ್ಯಾಯ ನಾಮಗಳು. 1854ರಲ್ಲಿ ಮ್ಯಾಕ್ಸ್‍ಮುಲ್ಲರ್ ಈ ವರ್ಗದ ಭಾಷೆಗಳಿಗೆ ಮುಂಡಾ ಎಂಬುದಾಗಿ ನಾಮಕರಣ ಮಾಡಿದ. ಕ್ರಿ. ಪೂ. 3500ರಲ್ಲಿ ಆದಿಮ ಮುಂಡಾ ಭಾಷೆ ಅಸ್ತಿತ್ವದಲ್ಲಿ ಇದ್ದಿರಬಹುದೆಂದು ನಾರ್ಮನ್ ಎಚ್.ಜೈಡ್ ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ಪಶ್ಚಿಮ ಬಂಗಾಲ, ಒರಿಸ್ಸ, ಬಿಹಾರ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಅನೇಕ ಭಾಗಗಳಲ್ಲಿ ಈ ವರ್ಗದ ಭಾಷೆಗಳನ್ನು ಮಾತಾಡುವ ಜನರಿದ್ದಾರೆ. ಅವರ ಸಂಖ್ಯೆ 5.814,496 (1971). ಅಧ್ಯಯನ ದೃಷ್ಟಿಯಿಂದ ಈ ವರ್ಗದ ಭಾಷೆಗಳನ್ನು ಪೂರ್ವ ಮುಂಡಾ, ಪಶ್ಚಿಮ ಮುಂಡಾ, ಉತ್ತರ ಮುಂಡಾ, ದಕ್ಷಿಣ ಮುಂಡಾ ಮತ್ತು ಮಧ್ಯ ಮುಂಡಾ ಎಂಬುದಾಗಿ ವರ್ಗೀಕರಿಸಲಾಗಿದೆ. ಇವುಗಳ ಪೈಕಿ ಮುಖ್ಯವಾದವು: ಕರ್ಮಲಿ, ಮಹಿಲಿ, ಖರಿಯ, ಸಂತಾಲಿ, ಭೂಮಿಜ್, ಖೇರ್ವಾರಿ, ಮಂಕರಿ, ಸೋರಾ. ಜು ಆಂಗ ರೆಮೊ, ಬಿರ್ಹೋರ್. ಮಿರ್ಧಾ.

	ಆದಿಮ ಮುಂಡಾಧ್ವನಿವ್ಯವಸ್ಥೆಯಲ್ಲಿ ಐದು ಸುಧಾರಣ ಸ್ವರಗಳೂ ಐದು ಕಾಕಲ್ಯಸ್ವರಗಳೂ ಇದ್ದುವು. ಮೂರ್ಧನ್ಯ ಧ್ವನಿಗಳಿರಲಿಲ್ಲ. ಈ ಭಾಷೆಗಳಲ್ಲಿ ಐದು ಸ್ವರಗಳು ವ್ಯವಸ್ಥೆ ಇದೆ. ಅವುಗಳಲ್ಲಿ ದೀರ್ಘಸ್ವರಗಳಿಗೆ ವೈದೃಶ್ಯಾತ್ಮಕ ಲಕ್ಷಣಗಳಿಲ್ಲ. ಅಕೃತಿಮಾದ ಕೊನೆ ಸ್ಥಾನದಲ್ಲಿ ಘೋಷವ್ಯಂಜನಗಳ ವೈದೃಶ್ಯ ಇಲ್ಲ. ಅವು ಧ್ವನ್ಯಾತ್ಮಕವಾಗಿ ಸಂವೃತ. ಅಲ್ಪಘೋಷ ಅಥವಾ ಅಘೋಷ ಕಾಕಲ್ಯಧ್ವನಿಗಳಾಗಿವೆ. ಸಾಧಿಕ ಆಕೃತಿಮಾಗಳಲ್ಲಿ ಭಿನ್ನತೆಗಳಿವೆ. ವಾಕ್ಯರಚನೆ ಬಗ್ಗೆ ಕೆಲಸ ನಡೆಯಬೇಕಾಗಿದೆ.

	ಭಾಷಾ ಬರೆವಣಿಗೆಗೆ ಆಯಾ ಪ್ರಾಂತೀಯ ಭಾಷೆಯ ಲಿಪಿಯನ್ನು ಬಳಸುವುದಿದೆ. ಸೋರಾ, ಸಂತಾಲಿ ಭಾಷೆಗೆ ಸಂಬಂಧಿಸಿದಂತೆ ಕೋಶಗಳು ಈಗಾಗಲೇ ಪ್ರಕಟವಾಗಿವೆ. ವಾನ್ ಎಮೇಲಿನ್ ಮತ್ತು ಹಾಫ್‍ಮನ್ ಅವರ ಎನ್‍ಸೈಕ್ಲೊಪೀಡಿಯ ಮುಂಡಾರಿಕಾ ಎಂಬ ಕೃತಿ ಈ ವರ್ಗದ ಭಾಷೆಗಳ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತದೆ.		
	(ಕೆ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ